Monday, November 29, 2010

ಭಾಗ 2



"ಕ್ರೀ....!!!" ಅದು ಹಾಗೆ, ಕಾರಿನ ಹಾರ್ನ್ ಶಬ್ಧ. ಶಬ್ಧ ಕೇಳಿದವ್ನೇ ತನ್ನ ಕೋಣೆಗೆ ಹೋಗಿ ಬಾಗಿಲು ಭದ್ರ ಮಾಡ್ಕೊಂಡು ಸುಮ್ನೇ ಕೂತ. ಆವಾಗ ಕೇಳಿದ್ದೇ ಒಂದು ದೊಡ್ಡ ಧ್ವನಿ, "ಏನೇ...?? ಬಂದಾ?" ಪ್ರವೀಣ ಅಪ್ಪ ಬಂದಿದಾರೆ ಅಂತ ಕನ್ಫರ್ಮ್ ಮಾಡ್ಕೊಂಡೆ ರೂಮಿನೊಳಗೆ ಹೋದ, ಚಿಕ್ಕಂದಿನಿಂದಲೂ ಕೂಡ ಹಾಗೆ, ಅಪ್ಪ ಅಂದ್ರೆ ಭಯ, ಏನೋ ಅಳುಕು, ಏನೋ ಹಿಂಜರಿಕೆ. ಅದೇನು ಭಯವೋ? ಭಯ ಮಿಶ್ರಿತ ಗೌರವನೋ? ಆವ್ನ್ ತಾಯಿಗೆ ಅರ್ಥ ಆಗ್ತಿರ್ಲಿಲ್ಲ. ಚಿಕ್ಕವ್ನಿದ್ದಾಗ ಅದೊಂದು ಘಟನೆ ನೋಡೇ ಅವ್ನು ಅಪ್ಪನ ಮೇಲೆ ಭಯ ಬಿದ್ದದ್ದು. ಅವತ್ತು ಶುಕ್ರವಾರ, ಅವ್ನಿಗೆ ಅದೂ ಕೂಡ ನೆನಪಿದೆ, ಶಾಲೆಯಿಂದ ಮನೆಗೆ ಬಂದವನೇ, ಬಾಗ್ ಅಲ್ಲೇ ಎಸೆದು ಕೂತವ್ನಿಗೆ ಅಮ್ಮ "ಎದ್ದು ಮುಖ ತೋಳ್ಕೊ, ಲಕ್ಷೀ ದೇವಸ್ತಾನಕ್ಕೆ ಹೋಗ್‌ಬೇಕು, ಬಂದಮೇಲೆ ನಿಂಗೆ ಬಿಸಿ ಬಿಸಿ ಮಿರ್ಚಿ ಮಾಡ್ಕೋಡ್ತೀನಿ" ಅಂತ ಅನ್ನೋದೇ ತಡ ಬಾಯಲ್ಲಿ ಗಂಗೆ ಯಮುನೆ..!! ಅದೇ ವಿಚಾರದಲ್ಲಿ ಮೇಲೇಳೋದೇ ತಡ, ಹೊರಗಡೆ ಜೋರಾಗಿ ಕೂಗಾಟದ ಸದ್ದು. ಏನಂತ ಅವ್ನು ಅಮ್ಮ ಇಬ್ರೂ ಹೊರಗಡೆ ನೋಡ್ತಾರೆ, ಅಪ್ಪ..!! "ಅಮ್ಮಾ ಅಪ್ಪ ಯಾಕೆ ಅವ್ರನ್ನ ಹೊಡಿತೀದಾರೆ?" ಅಂತ ಕೇಳೋದೇ ತಡ ಅಮ್ಮ, "ರೀ ಏನ್ರೀ ಇದು ಮನೆ ಮುಂದೆ ಈ ರಾಮಾಯಣ? ನಡೀರಿ ಒಳಗಡೆ" ಅಂತ ಅಪ್ಪ, ಅಮ್ಮ ಹಾಗೂ ಅದು. ಅದರ ಹೆಸರು ಕೂಡ ಗೊತ್ತಿರ್ಲಿಲ್ಲ. ಅಪ್ಪ ಅವ್ರನ್ನ ಕರೀತಿದ್ದದೇ ಹಾಗೆ "ಅದು" ಬೆವರ್ಸಿ ನನ್ಮಗ. ಮೇಲಿಂದ ಕೆಳಗಡೆ ಒಂದ್ಸಾರಿ ನೋಡಿದ ಪ್ರವೀಣ, ಬಾತು ಹೋದ ಕಣ್ಣು,ಮೂಗಿನಲ್ಲಿ ರಕ್ತ,ಕಣ್ಣಲ್ಲಿ ನೀರು.ಅಪ್ಪನ ಏಟಿಗೆ ದೊಡ್ಡಪ್ಪ ಹಣ್ಣುಗಾಯಿ ನೀರುಗಾಯಿ.! ಹೌದು, ಆವ್ನೇ ಅಪ್ಪನ ಸ್ವಂತ ಅಣ್ಣ, ಶ್ರೀರಾಮ, ಎಲ್ಲರೂ ಅವ್ರನ್ನ ಕರೀತಿದ್ದದು ರಾಮಪ್ಪ ಅಂತ. "ಕುಡುಕ ಪಿಂಡ" ಅಪ್ಪ ಅವ್ರನ್ನ ಬೈತಿದ್ದದ್ದೆ ಹಾಗೆ "ಕುಡುಕ ಪಿಂಡ ನನ್ಮಗ, ನಮ್ಮ ಮನೆತನ ಗೌರವ ಹಾಳು ಮಾಡೋಕೆ ಹುಟ್ಟಿದಾನೆ, ಇವ್ನಿಂದ ನಯಾ ಪೈಸೆ ಉಪಯೋಗ ಇಲ್ಲ, ಹೋಗಿ ಎಲ್ಲಾದ್ರೂ ಸಾಯಿ" ಅವ್ರನ್ನ ಕಂಡ್ರೆ ಅಪ್ಪನಿಗೆ ಮೈ ಉರಿ. ವಿಪರೀತ ಕುಡಿತ, ಸ್ವಂತ ತಾಯಿ ತಂದೆನ ಮನೆ ಇಂದ ಹೊರಗಡೆ ನೂಕಿದ್ದ, ಆ ಪಾಪದ ಜೀವಕ್ಕೆ ಅಪ್ಪಾನೆ ಕರೆದು ಮನೇಲಿ ಆರೈಕೆ ಮಾಡಿದ್ದು, ಆ ನೋವಿಗೆ ಆ ಹಣ್ಣಾದ ಜೀವಗಳು ಒಂದರ ಹಿಂದಂತೆ ಒಂದು ಕೇವಲ 15 ದಿನದಲ್ಲಿ ಪ್ರಾಣ ಬಿಟ್ಟಿದ್ವು ಇದ್ದ ೩ ಎಕರೇ ಗದ್ದೆ ಮಾರಿ ಜೂಜಿಗೆ ಹಣ ಬಿಟ್ಟು ಬಂದಿದ್ದ, ಆಗ ಅಪ್ಪಾನೆ ಹೋಗಿ ಅವ್ರಿವರಿಗೆ ಹೇಳಿ ಆ ಗದ್ದೆನ ಬಿಡಿಸಿ ಅವ್ರ ಅತ್ತಿಗೆ ಹೆಸರಿಗೆ ಮಾಡ್ಸಿದ್ದು. ಅಪ್ಪನ ಅತ್ತಿಗೆಯದು ತುಂಬ ಅಂತ:ಕರಣದ ಮನಸು, ತುಂಬಾ ತಾಯಿಯ ಹಾಗೆ ಮಾತನಾಡಿಸುವದು, ಆರೈಕೆ ಮಾಡುವುದು. ಆದಕ್ಕೆ ಏನೋ ಅವ್ರಿಗೆ ಅಂತ ಗಂಡ ಸಿಕ್ಕಿದ್ದು.
ಕೆಂಪಗೆ ಟೊಮ್ಯಾಟೋ ಗಾತ್ರದ ಕಣ್ಣನ್ನು ನೆಲದ ಕೆಳಗೆ ತೋರಿಸುತ್ತಾ ಕೂತವನಿಗೆ ಅಮ್ಮ, "ತಗೋಳಿ" ಅಂತ ಪಂಜೆ, ಅಂಗಿ ಕೊಟ್ಟು, "ಸ್ನಾನ ಮಾಡ್ಕೊಂಡು ಬಂದು ಊಟ ಮಾಡಿ" ಅಂದ್ಲು. ಯಾರು ಏನೇ ಮಾಡ್ಲಿ, ಏನೇ ಅನ್ಲೀ ಆಕೆಯದ್ದು ತುಂಬಾ ಮೃದು ಮನಸ್ಸು, ಏನೇ ಕೆಟ್ಟ ಘಟನೆ ಯಾದ್ರೂ ಬೇಗ ಮರೆತು ಬಿಡ್ತಾಳೆ. ಮರೆಯದಿದ್ರೂ ಮರೆತಹಾಗೆ ಇರ್ತಾಳೆನೊಪ್ಪಾ? ಅಂತ ಹೊಡೆತ ತಿಂದರೂ ಅಪ್ಪ ದೊಡ್ಡಪ್ಪನನ್ನ ಬಸ್ಸಿಗೆ ಹತ್ತಿಸಿ ಟಿಕೆಟೂ ತಗಿಸಿ, ಅವ್ರ ಕೈಗೆ 10 ರೂಪಾಯಿ ಅಷ್ಟೇ ಕೊಟ್ಟು ಹಾಸನಕ್ಕೆ ಸಾಗಿ ಹಾಕಿದ್ದ. ಹೀಗೆ ಮುಗಿದಿತ್ತು ಆ ದಿನ.
ಹಿಂದೆ ಆಗಿದ್ದದ್ದನ್ನ ನೆನೆಸಿಕೊಂಡು ಸುಮ್ನೆ ನಕ್ಕು ಬಿಟ್ಟ ಪ್ರವೀಣ. ಅಷ್ಟೊತ್ತಿಗಾಗ್ಲೇ ಸಾಯಂಕಾಲ 7.10, ಮೊಬೈಲ್ ಹಾಡೋಕ್ಕೆ ಶುರು ಮಾಡಿತು. ಫಟ್ ಅಂತ ಅದ್ರ ಬಾಯಿ ಮುಚ್ಚಿದ, ಅವ್ನಿಗೆ ಭಯ ಅಪ್ಪ ಎಲ್ಲಿ ಬೈತಾರೊ ಅಂತ, ಆವ್ರು ಹಿಂದೆ ಬೈದದ್ದು ನೆನಪಿತ್ತು. "ಏನು ವ್ಯವಹಾರನೋ, ನನ್ಮಗ, ಯಾವಾಗ್ ನೋಡಿದ್ರೂ ಬರೀ ಮೊಬೈಲೂ ಮೊಬೈಲೂ ಅಂತ ಸಾಯ್ತಾನೆ ಥೊ.." ಆಂದುಕೊಂಡು ತನ್ನ ಗೆಳೆಯ ರಮೇಶನಿಗೆ messege ಮಾಡಿದ, 'm coming, be cool...." ಬೇಗ ಬೇಗ ರೆಡೀ ಆದವ್ನೇ ಅಮ್ಮನ ಹತ್ತಿರ "ಅಮ್ಮಾ" ಅಂತ ಕೈ ಚಾಚಿದ, "ಏನೋ ನಿಂದು?" ಅಂತ ಅಮ್ಮ ಅಂದ್ರೆ, "ಅಮ್ಮ 50 ರೂಪಾಯಿ ಕೊಡೆ ಅಂದ. ನಿಮ್ಮಪ್ಪನ ಹತ್ರ ಕೇಳೋ ಧೈರ್ಯ ಇಲ್ಲ ನನ್ಮಗನೆ ನನ್ ಪ್ರಾಣ ತಿನ್ನು,ನನ್ ಸಂಬಳ ಎಲ್ಲ ನಿನ್ ಖರ್ಚಿಗೆ ಆಯ್ತು ಅಂತ 50 ರ ನೋಟು ಕೊಟ್ಟಳು" ಮಾಡೋದು ಪ್ರಥಮ ದರ್ಜೆ ಗುಮಾಸ್ತೆ ಕೆಲಸ ವಾದ್ರೂ ಮನೆ ಯಲ್ಲಿ ಯಾವುದಕ್ಕೊ ಕೊರತೆ ಇರಲಿಲ್ಲ, ಗಂಡ ದೊಡ್ಡ ವ್ಯಾಪಾರಸ್ಥ ಆದ್ರೂ ಅವ್ನ ಹೆಂಡತಿ ಮನೇಲಿ ಸುಮ್ನೇ ಕೂಡೋದು ಬೇಡ ಅಂತ ಪರೀಕ್ಷೆ ಬರೆಸಿ, ತಾಹಶೀಲ್ದಾರ್ ಕಛೇರಿಯಲ್ಲಿ ನೌಕರಿ ಮಾಡು ಅಂದಿದ್ದ. ಅದರಂತೆ ಆಕೆ ತುಂಬಾ ಶ್ರದ್ಧೆಯಿಂದ ಮನೆ ಹಾಗೂ ತನ್ನ ಕೆಲಸವನ್ನು ಹೇಗೋ ನಿಭಾಯಿಸುತ್ತಿದ್ದಳು.....

No comments:

Post a Comment